ನಿಡುಗಲ್ಲು
	ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಒಂದು ಗ್ರಾಮ. ಪಾವಗಡದಿಂದ 29 ಕಿ.ಮೀ. ಪಶ್ಚಿಮಕ್ಕಿದೆ. ಗ್ರಾಮದ ಪಕ್ಕದಲ್ಲೇ ಇರುವ ಬೆಟ್ಟ ಸಮುದ್ರಮಟ್ಟದಿಂದ ಸುಮಾರು 1,150 ಮೀ. ಎತ್ತರವಾಗಿದೆ. ದುರ್ಗದಿಂದ ಆವೃತವಾಗಿರುವ ಬೆಟ್ಟ ನಿಡಿದಾಗಿರುವುದರಿಂದ ಇದಕ್ಕೆ ನಿಡಿಗಲದುರ್ಗು, ನಿಡುಗಲ್ ಎಂಬ ಹೆಸರು ಬಂದಿದೆ. ಬೆಟ್ಟದ ಮೇಲೆ ಏಳುಸುತ್ತಿನ ಕೋಟೆಯಿದೆ. 9-10ನೆಯ ಶತಮಾನಗಳಲ್ಲಿ ಇದು ನೊಳಂಬರ ಆಳ್ವಿಕೆಯಲ್ಲಿತ್ತು. ಅನಂತರ ಚಾಳುಕ್ಯರ ಪ್ರಭುತ್ವವನ್ನು ಒಪ್ಪಿದ ಚೋಳರಾಜ ಇರುಂಗೋಳನ ವಶದಲ್ಲಿತ್ತು. 1173-1220ರ ಅವಧಿಯಲ್ಲಿ ಹೊಯ್ಸಳ ದೊರೆ ಎರಡನೆಯ ಬಲ್ಲಾಳನಿಗೂ ಅನಂತರ ಸ್ಥಳೀಯ ಪಾಳೆಯಗಾರರಿಗೂ ಸೇರಿತ್ತು. ನಿಡುಗಲ್ ಪಾಳೆಯಗಾರರಲ್ಲಿ ಹೊಳಕಲ್ ಬೊಮ್ಮನಾಯಕ (1337) ಪ್ರಮುಖನಾದವ. ಈತನ ಸಂತತಿಯವರೇ ಆದ ಚಿಕ್ಕ ತಿಪ್ಪನೃಪ ಸುತ್ತಮುತ್ತಲಿನ ದುರ್ಗಗಳನ್ನು ಜಯಿಸಿದನಲ್ಲದೆ, ತನ್ನ ಹೆಂಡತಿ ಲಕ್ಷ್ಮಿದೇವಿಯ ಹೆಸರಿನಲ್ಲಿ ದೇವಸ್ಥಾನ ಮತ್ತು ಕೆರೆಯನ್ನು ಕಟ್ಟಿಸಿದ. ಇವರ ಅನಂತರ ಹರತಿ ಸಂತತಿಯವರು ಈ ದುರ್ಗವನ್ನು ಆಳಿದರು. ಈ ಸಂತತಿಯಲ್ಲಿ ರಂಗಪ್ಪನಾಯಕ, ಸಿದ್ದಣನಾಯಕ, ಇಮ್ಮಡಿ ಕೆಂಚಪ್ಪನಾಯಕ, ಇಮ್ಮಡಿ ರಂಗಪ್ಪ ನಾಯಕ, ಸರ್ಜಾ ಕೃಷ್ಣಪ್ಪರಾಜ, ಕಸ್ತೂರಿರಂಗಪ್ಪನವರು, ಮುಮ್ಮಡಿ ರಂಗಪ್ಪ ನಾಯಕ-ಇವರು ಪ್ರಮುಖರು. ಇವರ ಅನಂತರ ಇದು ಹೈದರ್, ಟೀಪು ಮತ್ತು ಮೈಸೂರು ಅರಸರ ಆಳ್ವಿಕೆಗಳಿಗೆ ಒಳಪಟ್ಟಿತ್ತು.

	ಬೆಟ್ಟದ ತಪ್ಪಲಲ್ಲಿ ಹೊಟ್ಟೇಶ್ವರ (ಸರವದೇಶ್ವರ) ರಾಮ, ಕಾಶಿವಿಶ್ವೇಶ್ವರ ಮತ್ತು ಆಂಜನೇಯ ದೇವಸ್ಥಾನಗಳಿವೆ. ಕೋಟೆಯಲ್ಲಿ ಕಣಜಗಳು, ಮದ್ದಿನ ಮನೆಗಳು, ದೊಣೆಗಳು, ಮತ್ತು ಅರಮನೆಯ ಅನೇಕ ಅವಶೇಷಗಳಲ್ಲದೆ ಬಸವಣ್ಣ, ಕಾಳಹಸ್ತೀಶ್ವರ, ನಾಗೇಶ್ವರ, ಚನ್ನಕೇಶವ, ಲಕ್ಷ್ಮಣೇಶ್ವರ ಮತ್ತು ಸೋಮೇಶ್ವರ ದೇವಸ್ಥಾನಗಳೂ ಇವೆ. ದ್ರಾವಿಡ ಶೈಲಿಯಲ್ಲಿರುವ ಸೋಮೇಶ್ವರ ದೇವಸ್ಥಾನ 1292ರಲ್ಲಿ ನಿರ್ಮಿತವಾದ್ದು. ನಿಡುಗಲ್ಲು ಗ್ರಾಮದಿಂದ ಸ್ವಲ್ಪ ದೂರದಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ವೀರಭದ್ರ, ಪಾಶ್ರ್ವನಾಥ (ಜೋಗವಟ್ಟಿಗೆ ಬಸದಿ), ಆದಿನಾರಾಯಣ, ಲಕ್ಷ್ಮೀನರಸಿಂಹ, ನಾಗರೇಶ್ವರ, ಮಲೆಯ ಮಲ್ಲಿಕಾರ್ಜುನ ಮತ್ತು ಸೋಮೇಶ್ವರ ದೇವಸ್ಥಾನಗಳಿವೆ. ಇಲ್ಲಿ ಮಿರ್ಜಾ ಹುಸೇನ್ ವಲಿ ಎಂಬ ಫಕೀರನ ಸಮಾಧಿ ಇದೆ. ವರ್ಷಕ್ಕೊಮ್ಮೆ ಈತನ ಹೆಸರಿನಲ್ಲಿ ಉರುಸ್ ನಡೆಯುತ್ತದೆ.
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ